Thursday, August 14, 2008

ಸಚಿವರು, ಅಧಿಕಾರಿಗಳಿಗೆ ಮಾರ್ಗಸೂಚಿ


ಯೋಜನೆಗಳ ಅನುಷ್ಠಾನ ಪರಿಶೀಲನೆಗೆ ಉನ್ನತ ಸಮಿತಿ -೩ ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ -ಮುಖ್ಯಮಂತ್ರಿ ನೇತೃತ್ವದ ಮಂಥನ ಕಾರ್ಯ ಕ್ರಮದ ನಿರ್ಧಾರ
1. ಪ್ರತಿ ಶನಿವಾರ ತಹಸೀಲ್ದಾರ್ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ತಮ್ಮ ವ್ಯಾಪ್ತಿಯ ತಾಲೂಕಿನ ಹೋಬಳಿಗಳಿಗೆ ಭೇಟಿ ನೀಡಿ, ಅಲ್ಲಿನ ಸಾರ್ವಜನಿಕ ಸಮಸ್ಯೆಗಳ ನಿವಾರಣೆಗೆ ಪ್ರಯತ್ನಿಸಬೇಕು. ಈ ಸಂಬಂಧ ಶೀಘ್ರವೇ ಸುತ್ತೋಲೆ ಹೊರಬೀಳಲಿದೆ.
2. ಸಾಮಾನ್ಯವಾಗಿ ಪ್ರತಿ ಗುರುವಾರ ಸಚಿವ ಸಂಪುಟ ಸಭೆ ನಡೆಯಲಿದೆ. ಆ ಸಂಪುಟ ಸಭೆ ನಡೆದ ದಿನದಂದು ಸಚಿವರೆಲ್ಲರೂ ತಮ್ಮ ಕಚೇರಿಯಲ್ಲೇ ಕುಳಿತು ಇಲಾಖೆಗೆ ಸಂಬಂಧಿಸಿದ ಕಡತಗಳ ವಿಲೇವಾರಿ ಮಾಡಬೇಕು. ಆ ದಿನ ರಾಜಕೀಯ ಮುಖಂಡರೂ ಸೇರಿದಂತೆ ಸಾರ್ವಜನಿಕರಿಗೆ ವಿಧಾನಸೌಧದ ಪ್ರವೇಶವನ್ನು ನಿರ್ಬಂಧಿಸಲಾಗುವುದು.
3.ಪ್ರತಿ ಜಿಲ್ಲಾ ಕೇಂದ್ರದಲ್ಲೂ ೫ ಎಕರೆ ಪ್ರದೇಶದಲ್ಲಿ ಸುಸಜ್ಜಿತ ಸ್ವೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲು ಖಾಸಗಿ ಆಸ್ಪತ್ರೆಗಳಿಗೆ ಅವಕಾಶ. ಈ ಸಂಬಂಧ ಈಗಾಗಲೇ ನಾರಾಯಣ ಹೃದಯಾಲಯ, ವ್ಹೊಕಾರ್ಡ್ ಮತ್ತಿತರ ಪ್ರಮುಖ ಆಸ್ಪತ್ರೆಗಳೊಂದಿಗೆ ಮಾತುಕತೆ ನಡೆಸಲಾಗಿದೆ.
4. ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಭ್ರಷ್ಟಾಚಾರ ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ.
5. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಸಮರ್ಪಕ ಅನುಷ್ಠಾನ ಸಂಬಂಧ ಮೊನ್ನೆಯಷ್ಟೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಂಪುಟ ಉಪಸಮಿತಿ ರಚನೆಯಾಗಿದೆ. ಇದೇ ಮಾದರಿಯಲ್ಲಿ ಶೀಘ್ರದಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳ ಪರಿಶೀಲನಾ ಸಮಿತಿ ಅಸ್ತಿತ್ವಕ್ಕೆ ಬರಲಿದೆ.
6. ಇನ್ನು ಮುಂದೆ ಸರ್ಕಾರಿ ನೌಕರಿ ಬಯಸುವವರಿಗೆ ಕಂಪ್ಯೂಟರ್ ಜ್ಞಾನ ಕಡ್ಡಾಯ. ಈಗಾಗಲೇ ಸೇವೆಯಲ್ಲಿರುವವರಿ ಗೆ ಕಂಪ್ಯೂಟರ್ ತರಬೇತಿ ನೀಡಲಾಗುವುದು. ಸಮೃದ್ಧ ಕರ್ನಾಟಕ ನಿರ್ಮಿಸುವ ಕನಸು ನನಸುಗೊಳಿಸುವ ಉದ್ದೇಶ ಹೊತ್ತು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬುಧವಾರ ನಗರದ ಐ‌ಐ‌ಎಂ ಆವರಣದಲ್ಲಿ ನಡೆಸಿದ ‘ಮಂಥನ’ ಹೆಸರಿನ ಮುಕ್ತ ಸಂವಾದದಲ್ಲಿ ಹೊರಹೊಮ್ಮಿದ ಪ್ರಮುಖ ತೀರ್ಮಾನಗಳಿವು.
ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಹೇಗೆ ಎಂಬುದರ ಕುರಿತು ಸುಮಾರು ಆರು ತಾಸುಗಳಿಗೂ ಹೆಚ್ಚು ಕಾಲ ವಿವಿಧ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳ ಅಭಿಪ್ರಾಯವನ್ನು ತಾಳ್ಮೆಯಿಂದ ಆಲಿಸಿದ ನಂತರ ಕೊನೆಯಲ್ಲಿ ಮುಖ್ಯಮಂತ್ರಿಗಳು ಮಾತನಾಡಿದರು.
ಈ ಸಭೆಗೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿತ್ತು. ಮುಂಬರುವ ಸೆಪ್ಟೆಂಬರ್ ೯ಕ್ಕೆ ತಮ್ಮ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದು ನೂರು ದಿನಗಳಾಗುತ್ತವೆ. ಆ ಸಮಯದಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಜನತೆಗೆ ಮಾಹಿತಿ ನೀಡಬೇಕು. ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳುವಂತೆ ಕರೆ ನೀಡಿದರು ಎಂದು ತಿಳಿದು ಬಂದಿದೆ.
ಅಧಿಕಾರಿಗಳು ಜನರ ಬಳಿ ತೆರಳಿ ಅವರ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಅಭಿವೃದ್ಧಿ ಕಾರ್ಯಕ್ರಮಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ತಹಸೀಲ್ದಾರ್‌ಗಳು ಪ್ರತಿ ಶನಿವಾರ ತಮ್ಮ ತಾಲೂಕು ವ್ಯಾಪ್ತಿಯ ಹೋಬಳಿಗಳಿಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ತೆರಳಿ ಕುಂದುಕೊರತೆಗಳನ್ನು ಆಲಿಸಬೇಕು. ಅವುಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಬೇಕು. ಈ ಭೇಟಿ ಕಾರ್ಯಕ್ರಮಕ್ಕೆ ಗೈರುಹಾಜರಾಗುವ ಅಧಿಕಾರಿಗಳಿಗೆ ಎರಡು ಬಾರಿ ಎಚ್ಚರಿಕೆ ನೀಡಿ ಮೂರನೇ ಬಾರಿ ಶಿಸ್ತು ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಪ್ರತಿ ತಿಂಗಳಿಗೊಮ್ಮೆ ತಹಸೀಲ್ದಾರ್‌ಗಳು ನಡೆಸುವ ಹೋಬಳಿ ಭೇಟಿಯ ಬಗ್ಗೆ ಹಠಾತ್ ಭೇಟಿ ನೀಡಿ ಪರಿಶೀಲಿಸಬೇಕು. ಈ ಬಗ್ಗೆ ಶೀಘ್ರದಲ್ಲಿಯೇ ಸುತ್ತೋಲೆ ಹೊರಡಿಸಲಾಗುವುದು ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಸಂಪುಟದ ಸಹೋದ್ಯೋಗಿಗಳು ತಮ್ಮ ಇಲಾಖೆಗೆ ಸೇರಿದ ಕಡತಗಳ ವಿಲೇವಾರಿ ಮಾಡುವಲ್ಲಿ ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಪ್ರತಿ ಗುರುವಾರ ನಡೆಯುವ ಸಚಿವ ಸಂಪುಟ ಸಭೆಯ ದಿನದಂದು ವಿಧಾನಸೌಧ ಅಥವಾ ವಿಕಾಸಸೌಧದ ಕಚೇರಿಯಲ್ಲೇ ಕುಳಿತು ಕಡತಗಳ ಪರಿಶೀಲನೆ ನಡೆಸಬೇಕು. ಈ ಕೆಲಸಕ್ಕೆ ಅಡಚಣೆಯಾಗುವುದನ್ನು ತಪ್ಪಿಸಲು ಸಂಪುಟ ನಡೆಯುವ ದಿನದಂದು ಸಾರ್ವಜನಿಕರಿಗೆ ವಿಧಾನಸೌಧ ಹಾಗೂ ವಿಕಾಸಸೌಧಗಳಲ್ಲಿ ಪ್ರವೇಶ ನಿರ್ಬಂಧಿಸಬೇಕು ಎಂದು ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು ಎಂದು ತಿಳಿದು ಬಂದಿದೆ.
ಇದು ತಮಗೂ ಅನ್ವಯಿಸುತ್ತದೆ. ತಾವು ಕೂಡ ಗುರುವಾರ ಕಚೇರಿಯಲ್ಲೇ ಕುಳಿತು ಕಡತಗಳ ಪರಿಶೀಲನೆ ನಡೆಸುವುದಾಗಿ ಯಡಿಯೂರಪ್ಪ ಸ್ಪಷ್ಟಪಡಿಸಿದರು.

3 ತಿಂಗಳಿಗೊಮ್ಮೆ ಪರಾಮರ್ಶೆ: ವಿವಿಧ ಇಲಾಖೆಗಳ ಅಡಿಯಲ್ಲಿನ ಯೋಜನೆಗಳ ಅನುಷ್ಠಾನ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಇದೇ ಸಂದರ್ಭ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ಈ ಸಮಿತಿಯು ವಿವಿಧ ಇಲಾಖೆಗಳ ಕಾರ್ಯದರ್ಶಿಗಳು ಹಾಗೂ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಲಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ತಾವು ಈ ಉನ್ನತ ಮಟ್ಟದ ಸಭೆ ನಡೆಸಿ ಪರಾಮರ್ಶೆ ನಡೆಸುವುದಾಗಿ ಅವರು ಹೇಳಿದರು.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೆ.ಸುಧಾಕರರಾವ್ ಸೇರಿದಂತೆ ಎಲ್ಲ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಗಳು ಪಾಲ್ಗೊಂಡು ತಮ್ಮ ಇಲಾಖೆಯ ಮುನ್ನೋಟದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಚಿತ್ರ ಸುದ್ದಿ : http://www.gulfkannadiga.com/news-12452.html

No comments: